Tuesday, June 7, 2011

ಶ್ರೀ ಲಂಕಾದ ಶ್ರೀಮಂತಿಕೆ


ಹಿಂದೂ ಮಹಾ ಸಾಗರದ ಮೇಲೆ ನಿಸರ್ಗದ ಸಿರಿಯನ್ನ ತನ್ನ ಒಡಲಲ್ಲಿ ಅಡಗಿಸಿಕೊಂಡಿರುವ ಶ್ರೀ ಲಂಕಾ ಒಂದು ದ್ವೀಪ ರಾಷ್ಟ್ರ. ಈ ರಾಷ್ಟ್ರದಲ್ಲಿ ಕಾಣಬರುವುದು ಬರೀ ಅರಣ್ಯ, ಆನೆಗಳ ದಂಡು. ಎಲ್ಲೆಡೆ ನೋಡಿದರೂ ಬಹು ಸುಂದರ ಗುಡ್ಡಗಳು, ಅವುಗಳ ಮಧ್ಯೆ ಚಹಾ ತೋಟಗಳು,. ಆದರೆ ಈಗ ಶ್ರೀ ಲಂಕಾ ಎಂದರೆ ನಮಗೆ ನೆನಪಾಗುವುದು, ಉಗ್ರಗಾಮಿಗಳ ಅಟ್ಟಹಾಸ, ಜನಗಳ ಉದ್ವೇಗ, ಸಂಶಯ. ಇಲ್ಲಿನ ಜನ ಬೌದ್ಧ ಧರ್ಮೀಯರಾಗಿದ್ದರೂ, ಈ ನಿತ್ಯ ಕದನದಿಂದ ಹೊರಬರಲಾಗಿಲ್ಲ
            ಇದು ಬಲು ಪುಟ್ಟ ಸುಂದರ ರಾಷ್ಟ್ರವಾಗಿದ್ದು ಅಭಿವೃದ್ದಿಯ ಹಾದಿಯಲ್ಲಿದೆ.  ಈ ರಾಷ್ಟ್ರದಲ್ಲಿ ಹಲವು ಸುಂದರ ನಗರಗಳಿವೆ. ಕೊಲೊಂಬೋ, ಕ್ಯಾಂಡಿ, ಅನುರಾಧಪುರ, ಗಲ್ಲೆ, ನವರೇಲಿಯ, ಬಾದುಲ್ಲಾ ಮುಂತಾದುವು. ಅದರಲ್ಲಿ ಕೊಲೊಂಬೋ ರಾಜಧಾನಿಯಾಗಿದ್ದು, ಎಲ್ಲರನ್ನೂ ಬಾ ಎಂದು ಕೈಬೀಸಿ ಕರೆಯುತ್ತಿದೆ. ಇತ್ತೀಚೆ‍ಗೆ ಒಲ್ಲೂವಿಲ್ ಎಂಬಲ್ಲಿ, ಒಂದು ಅಂತರ ರಾಷ್ಟ್ರೀಯ ವಿಚಾರ ಗೋಷ್ಟಿಯನ್ನು ಶ್ರೀ ಲಂಕಾ ವಿಶ್ವವಿದ್ಯಾಲಯವಾದ ಸೌಥ್ ಈಸ್ಟರ್ನ್ ಯೂನಿವರ್ಸಿಟಿಯವರು ಹಮ್ಮಿಕೊಂಡಿದ್ದರು. ಬೆಂಗಳೂರಿನಲ್ಲಿ ಶಿಕ್ಷಣ ಕ್ಶೇತ್ರದಲ್ಲಿ ಪ್ರಾದ್ಯಾಪಕಿಯಾಗಿರುವ ನನಗೆ ಇದರಲ್ಲಿ ಭಾಗಿಯಾಗಲು ವಿಶೇಷ ಆಹ್ವಾನವಿದ್ದುಕೊಲೊಂಬೋದ ಸಿರಿಮಾವೋ ಬಂಡಾರನಾಯಿಕೆ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಕಸ್ಟಮ್ಸ್ ಮುಂತಾದ ಕಾರ್ಯಗಳ ನಂತರ ಅನಿಸದ್ದು, ಇಲ್ಲಿನ ಜನಗಳ ಸ್ನೇಹಮಯ ವರ್ತನೆ. ಪ್ರತಿ ನಡವಳಿಕೆಯಲ್ಲೂ ಸೌಜನ್ಯತೆ. ಬೌದ್ಧಧರ್ಮದಿಂದ ಸ್ವಾಭಾವಿಕವಾಗಿ ಬಂದ ಸ್ವ ನಿಯಂತ್ರಣ ಇರಬಹುದೇ ಎಂದು. 

ಅದರಲ್ಲೂ ನೈರುತ್ಯ ಭಾಗದ ಜನರು ಕಪಟವರಿಯದವರು. ಇದು ನನ್ನ ಅನುಭವ. ಹೇಗೆಂದರೆ, ಶ್ರೀ ಲಂಕಾದ ಒಲ್ಲೂವಿಲ್ ಅಂಪಾರ ಜಿಲ್ಲೆಯಲ್ಲಿದ್ದು, ಪೂರ್ವದ ಬಟ್ಟಿಕಲೋವಾ ಬಂದರಿನ ಹತ್ತಿರವಿರುವುದು (ಬಟ್ಟಿಕಲೋವಾ ಅಂದರೆ 2004 ರ ತ್ಸುನಾಮಿಯಿಂದ ತತ್ತರಿಸಿದ ಪ್ರದೇಶ). ಈ ಸಂಪೂರ್ಣ ಪ್ರದೇಶ ಆರ್ಥಿಕವಾಗಿ ತತ್ತರಿಸಿದ ಪ್ರದೇಶವಾದರೂ ಆ ಜನಗಳ ಉತ್ಸಾಹ ತಗ್ಗಿಲ್ಲ. ಶಿಕ್ಷಣಕ್ಕೆ ಅವರು ಕೊಟ್ಟಿರುವ ಮಹತ್ವ ಹೆಮ್ಮೆಪಡುವಂತಾದ್ದಾಗಿದೆ. ಏಕೆಂದರೆ, ವಿಚಾರಗೋಷ್ಟಿಯಲ್ಲಿ ಸಭಾಪತಿಯಾಗಿದ್ದಾಗ, ಹಲವು ಹತ್ತಾರು ಶ್ರೀ ಲಂಕಾದ ಉಪನ್ಯಾಸಕರು ತಮ್ಮ ವಿಚಾರಗಳನ್ನು ಮಂಡಿಸಿದಾಗ, ನನಗನಿಸಿದ್ದು, ಇವರು ಸಹೃದಯ ಶ್ರೀಮಂತಿಕೆಯುಳ್ಳವರೆಂದು, ಸಜ್ಜನಿಕೆ ಇವರ ಉಸಿರು ಎಂದು. ಇವರೆಲ್ಲರ ತವಕ ತಮ್ಮ ರಾಷ್ಟ್ರದ ಅಭಿವೃದ್ದಿ. ಆದ್ದರಿಂದ ಈ ದಿಕ್ಕಿನೆಡೆ ಸಾಕಷ್ಟು ಸಂಶೋಧನಾ ಲೇಖನಗಳನ್ನು ಮಂಡಿಸಲಾಯಿತು. ಇವುಗಳಲ್ಲಿ, ಪ್ರವಾಸೋಧ್ಯಮದ ವಿಚಾರ, ಕೃಶಿ, ಭೌಗೋಳಿಕ ಸಂಪತ್ತಿನ ಸದುಪಯೋಗ, ತಂತ್ರ ಙ್ಙಾನದ ಸದುಪಯೋಗ, ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ, ಹೀಗೆ ಹತ್ತು ಹಲವಾರು ವಿಚಾರಗಳ ಚರ್ಚೆಗಳಿದ್ದವು. ಇಲ್ಲಿನ ಸಂಶೋಧನಾ ವಿಧ್ಯಾರ್ಥಿಗಳ ಮಾನಸಿಕ ಪ್ರಭುದ್ಧತೆ ಹೊಗಳುವಂತದ್ದಾಗಿದೆ. ಹೊಸ ವಿಚಾರಗಳನ್ನು ತಿಳಿಯುವಲ್ಲಿ ಇವರು ಸದಾ ಸಿದ್ದರಿದ್ದರು.              
            ಇದಷ್ಟೇ ಅಲ್ಲದೆ ವಿದೇಶಿಯರಾದ ನಮಗೆ ಕ್ಯಾಂಡಿ ಪಟ್ಟಣದ ಪೆರೆಂಡಯಾ ವಿಶ್ವವಿಧ್ಯಾಲಯಕ್ಕೆ ವಿಶೇಷ ಅಹ್ವಾನವಿದ್ದು, ಅಲ್ಲಿಗೆ ಹೋದಾಗ ನನ್ನ ಅನುಭವ ಹೇಳತೀರದಾಗಿತ್ತು. ಸಾವಿರಾರು ವಿಧ್ಯಾರ್ಥಿಗಳಿದ್ದಾಗ್ಯೂ ಸಹ ಸದ್ದಿಲ್ಲದ ಸಂಚಾರ, ಗದ್ದಲವಿಲ್ಲದ ನಡತೆ, ಸದಾ ಸಂತೋಷಭರಿತ ಚಟುವಟಿಕೆಗಳು, ಅಹ್ಲಾದತೆಯಿಂದ ಕೂಡಿದ ಮುಖಚರ್ಯೆ, ಕಲಿಯುವ ತವಕ, ಇವುಗಳೆಲ್ಲವನ್ನೂ ಕಂಡ ನನಗೆ, ಕಾರಣವೇನಿರಬಹುದೆಂದು ಹುಬ್ಬೇರಿಸುವಂತೆ ಮಾಡಿತು. ಅಲ್ಲಿನ ಭೌಗೋಳಿಕ ಶಾಸ್ತ್ರದ ಪ್ರಾಧ್ಯಾಪಕರಾದ ಪ್ರೊ. ನಂದ ಕುಮಾರ್‌ರವರನ್ನು ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದಾಗ, ಅವರು ನನ್ನನ್ನು ಮರು ಪ್ರಶ್ನಿಸಿದರು. ಕಾಲೇಜಿನ ವಿಧ್ಯಾರ್ಥಿಗಳಲ್ಲಿ ಚಂಚಲತೆ ಏಕಿರುವುದು? ಅದಕ್ಕೆ ನನ್ನ ಉತ್ತರ, ಅದು ವಯೋಸಹಜ, ಕಾಲೇಜ್ ವಿಧ್ಯಾರ್ಥಿಗಳ ವಯಸ್ಸಿನಲ್ಲಿ, ಗಂಡು ಹೆಣ್ಣುಗಳ ಸ್ನೇಹ, ಪ್ರೇಮ, ಮನಸೋಇಚ್ಚಾ ವಿಹರಿಸುವ ಮನೋಭಾವ ಸಹಜವಲ್ಲವೆ? ಎಂದು ಲೇವಡಿ ಮಾಡುವಂತಹುದಾಗಿತ್ತು. ಅದಕ್ಕೆ ಪ್ರೊಫೆಸರ್ ಯಾವುದೇ ಹಿಂಜರಿಕೆ ಇಲ್ಲದೆ, ಪ್ರೇಮಿಗಳ ಬಗ್ಗೆ ಮಾತಾಡಲು ಪ್ರಾರಂಭಿಸಿ, ನಮ್ಮ ವಿಶ್ವವಿಧ್ಯಾನಿಲಯದಲ್ಲಿ "ಪ್ರೇಮಿಗಳ ಸ್ವರ್ಗ"ವಿದೆ ಎಂದರು. ಇಲ್ಲಿ ಯುವ ಪ್ರೇಮಿಗಳು ಮನಸೋಇಚ್ಚೆ ವಿಹರಿಸಲು ವಿಶ್ವವಿಧ್ಯಾಲಯ ಮುಕ್ತ ವಾತಾವರಣವನ್ನು, ಒಳ್ಳೆಯ ಮರಗಳ ಸಮುಚ್ಚಯದಿಂದ ಹಾಗೂ ಹೂ ತೋಟದಿಂದ ನಿರ್ಮಿಸಿದೆ ಎಂದರು. ಇದರೊಂದಿಗೆ ಶಿಕ್ಶಣಕ್ಕೆ ಬೇಕಾಗುವ ಎಲ್ಲಾ ಸೌಲಭ್ಯಗಳು ಇವೆ. ಇನ್ನೇನು ಬೇಕು? ಇಷ್ಟು ಸಾಲದೇ? ಶಿಕ್ಶಣ ಉಲ್ಹಾಸಮಯ ಉತ್ತೇಜನವಾಗಲು ಎಂದು ನಮ್ಮನ್ನು ನಿಬ್ಬೆರಗಾಗುವಂತೆ ಮಾಡಿದರು. ನಮ್ಮ ಕಣ್ಣುಗಳು ಆ ಪ್ರದೇಶವನ್ನು ಹುಡುಕಲಾರಂಭಿಸಿದವು. ಅದನ್ನು ಕಂಡಾಗ ಹೊಸ ವಿಚಾರಗಳೆಡೆ ಇವರ ಮನಸ್ಸಿನ ಮುಕ್ತತೆ ಅಭಿನಂದಿಸುವಂತೆ ಮಾಡಿತು.
ಇದೇ ಕ್ಯಾಂಡಿ ಪಟ್ಟಣದಲ್ಲಿ ನಾವು ವಿಹಾರಕ್ಕೆಂದು ಹೋದಾಗ ಇನ್ನಷ್ಟು ಆಶ್ಚರ್ಯಗಳು ಕಂಡುಬಂದವು. ಜಪಾನೀ ನಿರ್ಮಿತ ವಾಹನಗಳನ್ನು ಇಲ್ಲಿ ಹೆಚ್ಚಾಗಿ ಬಳಸುವುದರಿಂದ ಅತ್ಯಾಧುನಿಕ ತಾಂತ್ರಿಕತೆಯುಳ್ಳ ಕಾರುಗಳದ್ದೇ ಇಲ್ಲಿ ಕಾರುಬಾರು. ಆದರೆ ಇವರ ರಸ್ತೆ ನಿಯಮ ಜಾಗ್ರತಿ ಮತ್ತು ಅವುಗಳ ಪಾಲನೆ, ಸ್ವಯಂಶಿಸ್ತು. ಪ್ರತಿ ಉಪಹಾರ ಗೃಹದಲ್ಲೂ ಧೂಮ ಪಾನಕ್ಕೆಂದೇ ಮೀಸಲಿಟ್ಟ ಕೊಠಡಿಗಳು, ಎಲ್ಲಾ ವ್ಯವಸ್ಥಿತ ಜೀವನದ ರೂಢಿಗಳು ಅಲ್ಲಿನ ವಿಷೇಶತೆಗಳು.
ಕ್ಯಾಂಡಿ ಪಟ್ಟಣದ  ಬುದ್ಧನ ಹಲ್ಲನ್ನು ರಕ್ಶಿಸುತ್ತಿರುವ ಪವಿತ್ರ ದೇವಾಲಯಕ್ಕೆ ಭೇಟಿ ಕೊಟ್ಟಾಗ, ಸಾವಿರಾರು ಬೌದ್ಧ ಬಿಕ್ಶುಗಳು ಬಂದು ಹೋಗುತ್ತಿದ್ದರೂ ಅಲ್ಲಿ ಜನಗಳ ಒತ್ತಡವಿಲ್ಲದೆ ಸರಾಗವಾಗಿತ್ತು. ದೇವಾಲಯಗಳಲ್ಲಿ ಆದಿ ಬುದ್ಧನ ಹಲ್ಲಿನ ದರ್ಶನ ಪಡೆಯಲು ಆಗದಿದ್ದರೂ, ಅಲ್ಲಿರುವ ವಸ್ತುಸಂಗ್ರಹಾಲಯ ನಮ್ಮನ್ನು ಇನ್ನಷ್ಟು ವಿಚಾರ ಕಲಿಯುವಂತೆ ಮಾಡಿತು.
            ಶ್ರೀ ಲಂಕಾದ ಊಟ-ಉಪಚಾರವಂತೂ ಯಾವುದೇ ರೀತಿ ವ್ಯತ್ಯಾಸಗಳನ್ನು ಹೊಂದದೆ ಎಲ್ಲಾ ಭಾರತದಂತೆಯೇ ಇತ್ತು. ಕರಾವಳಿ ಪ್ರದೇಶವಾದ್ದರಿಂದ ಇಲ್ಲೂ ಸಹ ಸಾಂಬಾರ ಪದಾರ್ಥಗಳು ಹೇರಳವಾಗಿ ದೊರಕುವುದರಿಂದ, ತಿಂಡಿ-ತಿನಿಸುಗಳು ಬಲು ರುಚಿಕಟ್ಟಾಗಿದ್ದವು. ಹಾಲು ಬೆರೆಸದ ಟೀ ಹಾಗೂ ಕಾಫೀ, ಶಾವಿಗೆ, ದಪ್ಪಗಿನ ದೋಸೆ (ಅಪ್ಪಂ), ಇಡ್ಲಿ ಇವೆಲ್ಲವೂ ಹೇರಳವಾಗಿ ದೊರೆಯುತ್ತವೆ. ಎಲ್ಲಾ ಹೋಟೆಲ್‍ಗಳಲ್ಲೂ ಅದೇ ವೈವಿವಿಧ್ಯತೆ, ಅದೇ ಅಚ್ಚುಕಟ್ಟು. ಆದರಲ್ಲೂ ಮಾಂಸಾಹಾರಿಗಳಿಗೆ ಅತಿ ಹೆಚ್ಚು ವೈವಿಧ್ಯಮಯ ಮಾಂಸಾಹಾರ ದೊರಕುತ್ತದೆ. ತಮಿಳುನಾಡಿನಲ್ಲಿದ್ದೇವೆ ಎಂಬ ಭಾವನೆ ಬರಿಸುವ ಸಂಗೀತ, ಹಳೇ ಶಿವಾಜಿ ಗಣೇಶನ್ ಹಾಡುಗಳು, ಈಗಲೂ ಅಲ್ಲಿ ಜನಪ್ರಿಯ.
ಇವರು ಸಹೃದಯ ಶ್ರೀಮಂತಿಕೆಯುಳ್ಳವರೆಂದು, ಸಜ್ಜನಿಕೆ ಇವರ ಉಸಿರು ಎಂದು ಮತ್ತೊಮ್ಮೆ ಇವರ ಜೀವನದ ರೀತಿಯನ್ನು ತಿಳಿಸಿದವು.            ಜಗತ್ತಿಗೇ ಶಾಂತಿ ಸಂದೇಶವನ್ನು ಸಾರಿದ ಬೌದ್ದ ಧರ್ಮವನ್ನು ಅನುಸರಿಸುತ್ತಿರುವ ಈ ದೇಶದಲ್ಲಿ, ಈಗಲೂ ಅಲ್ಲಲ್ಲಿ ಅಶಾಂತಿಯನ್ನು ಕಂಡಾಗ ಮಾತ್ರ ಮನಸ್ಸಿಗೆ ಬೇಸರವೆನಿಸುತ್ತದೆ.
            ಅಮೇರಿಕ ಅಥವ ಐರೋಪ್ಯ ದೇಶ ಪ್ರವಾಸಗಳಿಗಾಗುವಂತೆ ಹೆಚ್ಚಿನ ಹಣದ ಆವಶ್ಯಕತೆ ಇಲ್ಲ. ಭಾಷೆಯ ತೊಡಕಿಲ್ಲ. ಅಲ್ಪ ಸ್ವಲ್ಪ ತಮಿಳು, ಇಂಗ್ಲಿಶ್ ಸಾಕು. ಸರಾಗವಾಗಿ ವ್ಯವಹರಿಸಬಹುದು. ಭಾರತಕ್ಕೂ ಶ್ರೀ ಲಂಕಾಕ್ಕೂ ಹೆಚಿನ ಸಮಯದ ಅಂತರವಿಲ್ಲದಿರುವುದರಿಂದ, ನಮ್ಮ ದಿನ ನಿತ್ಯದ  ಕೆಲಸಕಾರ್ಯಗಳಿಗೆ, ನಿದ್ದೆ, ಊಟ ತಿಂಡಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಪ್ರವಾಸೋಧ್ಯಮವನ್ನು ಇನ್ನಷ್ಟು ಆಕರ್ಶಕ ರೀತಿಯಲ್ಲಿ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡಿದರೆ, ಸಾಕಷ್ಟು ಆರ್ಥಿಕವಾಗಿಯೂ ಸಹಕಾರಿಯಾಗಬಹುದು. ಹೆಚ್ಚಿನ ಗೊಂದಲವಿಲ್ಲದೆ ಅಂತರಾಷ್ಟ್ರೀಯ ಪ್ರವಸಕ್ಕೆ ಯೋಗ್ಯ ಪ್ರದೇಶವಾಗಿದೆ ಎಂದನಿಸುತ್ತದೆ.
            ಇದರೊಂದಿಗೆ ಇರುವ ಸಂಪನ್ಮೂಲಗಳನ್ನು ಬಹು ಉದ್ದೇಶಗಳಿಗೆ ಅರ್ಥಪೂರ್ಣವಾಗಿ ಬಳಸಿ ಕೊಂಡರೆ ದೇಶದ ಪ್ರಖ್ಯಾತಿ ಹೆಚ್ಚುವುದು. ಇದಕ್ಕೆ ತಾಂತ್ರಿಕತೆಯ ಬಳಕೆ ಅತಿ ಹೆಚ್ಚು ಆವಶ್ಯಕ. ಹಲವು ಹತ್ತರು ಯೋಜನೆಗಳನ್ನು ಶಿಕ್ಶಣದ ಪ್ರಾತಮಿಕ ಹಂತದಿಂದ ಆರಂಭಿಸಿ ಉನ್ನತ ವ್ಯಾಸಂಗದ ತನಕ ಕಲಿಸಲು ಪ್ರಯತ್ನಿಸಿದಾಗ, ಸಂಶೋಧನಾ ದಿಕ್ಕಿನಲ್ಲಿ ಹಲವು ಹತ್ತಾರು ಹೊಸ ವಿಚಾರಗಳ ಮೂಲಕ ಪ್ರಾಯೋಗಿಕವಾಗಿ ಬಳಸುವಂತಾಗಬಹುದು.
            ಒಟ್ಟಾರೆ ನಮಗನ್ನಿಸುವುದುಈ ರಾಷ್ಟ್ರದ ಶ್ರೀಮಂತಿಕೆಯಾದ ಜನಗಳ ಸರಳ ಜೀವನ, ಸಜ್ಜನಿಕೆ, ಆಡಂಬರ ರಹಿತ ಅಬ್ಬರವಿಲ್ಲದ ನಡತೆ. ಇವೆಲ್ಲವೂ ಶ್ರೀ ಲಂಕಾವನ್ನು ಸುಪ್ರಸಿದ್ಧ ರಾಷ್ಟ್ರವನ್ನಗಿ ಮಾಡಬಹುದು ಎಂದು.